ಚಿತ್ರಸೇನ -
ಈ ಹೆಸರಿನ ಹಲವು ವ್ಯಕ್ತಿಗಳು ಮಹಾಭಾರತದಲ್ಲೂ ಭಾಗವತದಲ್ಲೂ ಕಂಡುಬರುತ್ತಾರೆ. ಇದರಲ್ಲಿ ಮುಖ್ಯನಾದವ ಚಿತ್ರಸೇನನೆಂಬ ಗಂಧರ್ವ; ವಿಶ್ವಾವಸುವಿನ ಮಗ. ಈತ ಅರ್ಜುನನಿಗೆ ಗಂಧರ್ವವೇದವನ್ನು ಕಲಿಸಿದ. ಅರ್ಜುನ ಇಂದ್ರಕೀಲದಿಂದ ದೇವಲೋಕಕ್ಕೆ ಹೋಗಿ ಅಲ್ಲಿ ವಾಸಮಾಡುತಿದ್ದ ಕಾಲದಲ್ಲಿ ಇಂದ್ರನ ಅಪ್ಪಣೆಯಂತೆ ಚಿತ್ರಸೇನ ಅರ್ಜುನನನ್ನು ಮೋಹಗೊಳಿಸಲು ಊರ್ವಶಿಯನ್ನು ಅವನ ಬಳಿಗೆ ಕಳುಹಿಸಿದ. ಪಾಂಡವರು ವನವಾಸದಲ್ಲಿದ್ದಾಗ ದುರ್ಯೋಧನ ಅಲ್ಲಿಗೆ ಬಂದು ತನ್ನ ವೈಭವವನ್ನು ಅವರ ಮುಂದೆ ಪ್ರದರ್ಶಿಸಿ ಅವರನ್ನು ಹೀಯಾಳಿಸಿ ವಿಜೃಂಬಿಸುತ್ತಾನಷ್ಟೆ. ಆಗ ಇಂದ್ರನ ಅಪ್ಪಣೆಯ ಮೇರೆಗೆ ಚಿತ್ರಸೇನ ಆ ವನಕ್ಕೆ ಬಂದು ದುರ್ಯೋಧನನನ್ನು ಸೆರೆಹಿಡಿದು ಕೈಕಾಲು ಕಟ್ಟಿ ಇಂದ್ರಲೋಕಕ್ಕೆ ಒಯ್ಯಲುಪಕ್ರಮಿಸುತ್ತಾನೆ. ಅದನ್ನು ಕಂಡ ಯುಧಿಷ್ಟಿರ ತನ್ನ ವಂಶದವನಾದ ದುರ್ಯೋಧನನಿಗೆ ಆದ ಅಪಮಾನ ಸಹಿಸದೆ, ಅವನನ್ನು ಚಿತ್ರಸೇನನ ಬಂಧನದಿಂದ ಬಿಡಿಸಬೇಕೆಂದು ಅರ್ಜುನನಿಗೆ ಆಜ್ಞಾಪಿಸುತ್ತಾನೆ. ಅಂತೆಯೇ ಅರ್ಜುನ ಚಿತ್ರಸೇನನ್ನು ಸೋಲಿಸಿ ದುರ್ಯೋಧನನನ್ನು ಬಂಧನದಿಂದ ಬಿಡಿಸುತ್ತಾನೆ.

	ಮಹಾಭಾರತದಲ್ಲಿ ಬರುವ ಇತರ ಚಿತ್ರಸೇನರಲ್ಲಿ ಒಬ್ಬ ಅಭಿಸಾರ ದೇಶದ ದೊರೆ. ಈತ ರಾಜಸೂಯಯಾಗ ಸಮಯದಲ್ಲಿ ಅರ್ಜುನನಿಂದ ಪರಾಜಿತನಾದ. ಇನ್ನಿಬ್ಬರು ಪಾಂಡವರ ಪರವಾಗಿ ಮಹಾಭಾರತ ಯುದ್ಧದಲ್ಲಿ ಹೋರಾಡಿ ಮಡಿದವರು. ಇನ್ನೊಬ್ಬ ಚಿತ್ರಸೇನ ಕರ್ಣನ ಮಕ್ಕಳಲ್ಲಿ ಒಬ್ಬ. ಮತ್ತೊಬ್ಬ ದ್ರುಪದನ ಮಗ. ಧೃತರಾಷ್ಟ್ರನ ಮಕ್ಕಳಲ್ಲೂ ಚಿತ್ರಸೇನನೆಂಬುವನು ಒಬ್ಬ. ಇವರೆಲ್ಲ ಮಹಾಭಾರತ ಯುದ್ಧದಲ್ಲಿ ಹತರಾದರು. 

ಭಾಗವತದ ಇಬ್ಬರು ಚಿತ್ರಸೇನರಲ್ಲಿ ಒಬ್ಬ ಹದಿಮೂರನೆಯ ಮನ್ವಂತರದಲ್ಲಿದ್ದ ದೇವಸಾವರ್ಣಿ ಮನುವಿನ ಹಿರಿಯ ಮಗ. ಇನ್ನೊಬ್ಬ ವೈವಸ್ವತ ಮನುವಿನ ಮಗನಾದ ನರಿಷ್ಯಂತ ರಾಜನ ಹಿರಿಯ ಮಗ.					(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ